ಬೀಚಾಮ್, ಕ್ಯಾಥನ್ ಮ್ಯಾನ್ಸ್‍ಫೀಲ್ಡ್
1888-1923. ಇಂಗ್ಲಿಷ್ ಕತೆಗಾರ್ತಿ. ಕ್ಯಾಥರಿನ್ ಮ್ಯಾನ್ಸ್‍ಫೀಲ್ಡ್ ಈಕೆಯ ಕಾವ್ಯನಾಮ. ಶ್ರೇಷ್ಟವಾದ ಸಣ್ಣ ಕಥೆಗಳನ್ನು ಬರೆದು ಹೆಸರಾಗಿದ್ದಾಳೆ. ನ್ಯೂಜಿಲೆಂಡ್‍ನ ವೆಲ್ಲಿಂಗ್ಟನ್‍ನಲ್ಲಿ ಜನನ.

	ಕ್ಯಾಥಲಿನ್ 9 ವರ್ಷದವಳಿದ್ದಾಗ ಮೊದಲ ಕತೆ ಬರೆದಳು. ಲಂಡನ್ನಿನ ಕ್ವೀನ್ಸ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕಾಲೇಜು ವಾರ್ಷಿಕ ಪತ್ರಿಕೆಯ ಸಂಪಾದಕತ್ವ ವಹಿಸಿದ್ದಳು. ಚಿಕ್ಕಂದಿನಲ್ಲಿಯೇ ಸಂಗೀತದಲ್ಲಿದ್ದ ಆಸಕ್ತಿಯಿಂದಾಗಿ ಜೀವಮಾನವಿಡೀ ಸಂಗೀತಗಾರಳಾಗಿಯೇ ಉಳಿಯುವ ಅಲೋಚನೆಯಿತ್ತು. ಆದರೆ ಹಾಗಾಗಲಿಲ್ಲ. 1909ರಲ್ಲಿ ಜಾರ್ಜ್ ಬೋಡೆನ್ ಎಂಬಾತನೊಂದಿಗೆ ಆದ ವಿವಾಹ ಕೆಲವೇ ದಿನಗಳಲ್ಲಿ ಮುರಿದುಬಿತ್ತು. 1911ರಲ್ಲಿ ಮೊದಲ ಪರಿಚಯವಾದ ಮಿಡ್ಲ್‍ಟನ್ ಮರ್ರಿ ಮತ್ತು ಈಕೆಯ ಸ್ನೇಹ ಮುಂದೆ ಅನುರಾಗಕ್ಕೆ ಕಾರಣವಾಯಿತು. 1918ರಲ್ಲಿ ಮೊದಲ ವಿವಾಹದ ವಿಚ್ಛೇದನ ದೊರೆತ ಮೇಲೆ ಇವರು ಮದುವೆಯಾದರು. 

	1920ರಲ್ಲಿ ಬ್ಲಿಸ್ ಆಂಡ್ ಅದರ್ ಸ್ಟೋರೀಸ್ ಎಂಬ ಕಥಾ ಸಂಕಲನ ಪ್ರಕಟವಾಯಿತು. ಇದರಿಂದಾಗಿ ಕ್ಯಾಥರಿನ್ ಪ್ರಸಿದ್ಧಳಾದಳು. 1922ರಲ್ಲಿ ದಿ ಗಾರ್ಡನ್ ಪಾರ್ಟಿ, 1923ರಲ್ಲಿ ದಿ ಡೌವ್ಸ್ ನೆಸ್ಟ್, 1924ರಲ್ಲಿ ಸಮ್‍ತಿಂಗ್ ಚೈಲ್ಡಿಷ್, 1930ರಲ್ಲಿ ದಿ ಅಲೊ ಎಂಬ ಕಥಾ ಸಂಕಲನಗಳೂ 1923ರಲ್ಲಿ ಒಂದು ಕವನ ಸಂಕಲನವೂ ಪ್ರಕಟವಾದವು. ಶ್ವಾಸಕೋಶದ ರೋಗದಿಂದ ಬಹಳಕಾಲ ನರಳಿ 1922ರಲ್ಲಿ ವಿಶೇಷ ಚಿಕಿತ್ಸೆಗೆಂದು ಪ್ಯಾರಿಸ್‍ಗೆ ಹೋಗಿ 1923ರಲ್ಲಿ ಫಾಂಟೆನ್‍ಬ್ಲೊನಲ್ಲಿ ಮರಣ ಹೊಂದಿದಳು. 

	ಮರಣಾನಂತರದ ಪ್ರಕಟನೆಗಳಿಗೆಲ್ಲ ಪತಿ ಮಿಡ್ಲ್‍ಟನ್ ಮರ್ರಿಯೇ ಸಂಪಾದಕನಾಗಿದ್ದ. 1927ರಲ್ಲಿ ಜರ್ನಲ್ (ಆತ್ಮಕಥೆ), 1928ರಲ್ಲಿ ಲೆಟರ್ಸ್ ಮತ್ತು 1940ರಲ್ಲಿ ಸ್ಕ್ರಾಪ್ ಬುಕ್ ಪ್ರಕಟವಾದವು.

	ಈಕೆಯ ಕಥೆಗಳಲ್ಲಿ ಘಟನೆಗಳು ಹಾಗೂ ಸನ್ನಿವೇಶಗಳು ಪ್ರಧಾನವಾಗಿವೆ. ಪಾತ್ರಗಳ ಮನಸ್ಸಿನ ವ್ಯಾಪಾರಗಳ ಸೂಕ್ಷ್ಮ ನಿರೂಪಣೆಗಾಗಿ ಹೊಸ ತಂತ್ರಗಳನ್ನು ಬಳಸಿದಳು. ಸಣ್ಣ ಕಥೆಗಳ ಬಂಧ, ಕಲಾತ್ಮಕ ಶಿಲ್ಪಗಳಲ್ಲಿ ಈಕೆಯದು ಸಿದ್ಧಹಸ್ತ. ವಿಮರ್ಶಕರು ಈಕೆಯನ್ನು ರಷ್ಯಾದ ಪ್ರಸಿದ್ಧ ಕತೆಗಾರ ಚೆಕಾಫ್‍ಗೆ ಹೋಲಿಸಿದ್ದಾರೆ. 				  	   
 (ಕೆ.ಬಿ.ಪಿ.) 
(ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ